ಓವೆನ್, ವಿಲ್ಫ್ರೆಡ್: 1893-1918. ಆಂಗ್ಲಕವಿ. ಷ್ರಾಪ್ಷೈರಿನ ಆಸ್ವೆಸ್ಟ್ರಿಯಲ್ಲಿ ಹುಟ್ಟಿದ. ಬರ್ಕನ್ಹೆಡ್ ಇನ್ಸ್ಟಿಟ್ಯೂಟ್ ಮತ್ತು ಲಂಡನ್ ವಿಶ್ವವಿದ್ಯಾನಿಲಯಗಳಲ್ಲಿ ಇವನ ವಿದ್ಯಾಭ್ಯಾಸ ನಡೆಯಿತು. 1913-15ರ ವರೆಗೆ ಬೋರ್ಡೊ ಬಳಿಯಲ್ಲಿದ್ದ ಒಂದು ಫ್ರೆಂಚ್ ಕುಟುಂಬದ ಉಪಾಧ್ಯಾಯನಾಗಿದ್ದ. ಒಂದನೆಯ ಮಹಾಯುದ್ಧ ಕಾಲದಲ್ಲಿ ಆರ್ಟಿಸ್ಟ್‌್ಸ ಬಂದೂಕು ಪಡೆಗೆ ಈತ ಸೇರಿದ. ಅನಾರೋಗ್ಯದ ನಿಮಿತ್ತ 1917ರಲ್ಲಿ ಕ್ರೇಗ್ಲಾಕ್ಹಾರ್ಟ್ ಆಸ್ಪತ್ರೆಗೆ ಈತನನ್ನು ಕೊಂಡೊಯ್ಯಲಾಯಿತು. ಅಲ್ಲಿ ಇವನೊಂದಿಗಿದ್ದ ಸೀಗ್ಫ್ರಿಡ್ ಸಸೂನ್ ಎಂಬ ಖ್ಯಾತ ಕವಿ ಕವನಗಳನ್ನು ಬರೆಯಲು ಈತನನ್ನು ಉತ್ತೇಜಿಸಿದ. ಮುಂದೆ ಇವನನ್ನು ಒಂದು ಸೇನಾ ತುಕಡಿಯ ಅಧಿಕಾರಿಯಾಗಿ ಫ್ರಾನ್ಸಿಗೆ ಕಳುಹಿಸಿಕೊಡಲಾಯಿತು. ಈತ ಪ್ರದರ್ಶಿಸಿದ ಶೌರ್ಯಕ್ಕಾಗಿ ಸೇನಾಪದಕ ದೊರೆಯಿತಾದರೂ ಶಾಂತಿ ನೆಲೆಗೊಳ್ಳುವುದಕ್ಕೆ ಒಂದು ವಾರ ಮೊದಲೇ ಈತ ಯುದ್ಧರಂಗದಲ್ಲಿ ಗುಂಡಿನ ಏಟಿಗೆ ಬಲಿಯಾಗಿ ಸತ್ತ. ಸಸೂನ್ ಸಂಗ್ರಹಿಸಿರುವ ಈತನ ಕವನ ಸಂಗ್ರಹದಲ್ಲಿ (1920) ಪ್ರಾಸಕ್ಕಿಂತ ಸ್ವರಪ್ರಾಸಗಳು ಹೆಚ್ಚಾಗಿದ್ದು ಕವನಗಳ ಶೋಭೆಯನ್ನು ಹೆಚ್ಚಿಸಿವೆ. ಇದೇ ಧಾಟಿ ಮುಂದೆ ಬಂದ ಆಡೆನ್ ಮತ್ತು ಸ್ಪೆಂಡರ್ ಕವಿಗಳಿಗೆ ಒಂದು ಮಾದರಿಯನ್ನೊದಗಿಸಿತೆನ್ನ ಬಹುದು. ಪ್ರಧಾನವಾಗಿ ಓವೆನ್ ತನ್ನ ಕೃತಿಗಳಲ್ಲಿ ಯುದ್ಧದಿಂದ ಸಂಭವಿಸುವ ಅನಾಹುತಗಳನ್ನು ವಾಸ್ತವಿಕವಾಗಿ, ಮನಮುಟ್ಟುವಂತೆ ತೋರಿದ್ದಾನೆ.	(ಎನ್.ಎಸ್.ಎಲ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ